ಮೈಸೂರು ಸದಾಶಿವರಾವ್ - 19ನೆಯ ಶತಮಾನದಲ್ಲಿ ಬಾಳಿದ ವಾಗ್ಗೇಯಕಾರ. ಹರಿಕಾಂಭೋಜಿ ರಾಗದ ಸಾಕೇತನಗರನಾಥ, ಅಠಾಣರಾಗದ ವಾಚಾಮಗೋಚರುಂಡನಿ, ಸಾವೇರಿ ರಾಗದ ಶ್ರೀಕಾಮಕೋಟಿ ಪೀಠಸ್ಥಿತೇ ಎಂಬ ಪ್ರಸಿದ್ಧ ಕೃತಿಗಳ ಕರ್ತೃ. ಇವರು ತ್ಯಾಗರಾಜರ ಶಿಷ್ಯರಾಗಿದ್ದ ವಾಲಾಜಪೇಟೆ ವೆಂಕಟರಮಣ ಭಾಗವತರ ಶಿಷ್ಯ, ಭಾಗವತರ ಕೋರಿಕೆಯಂತೆ ತ್ಯಾಗರಾಜರು ವಾಲಾಜಪೇಟೆಗೆ ಬಂದಿದ್ದಾಗ, ಅಲ್ಲೇ ಇದ್ದ ಸದಾಶಿವರಾಯರು ಇವರನ್ನು ಕುರಿತು `ತ್ಯಾಗರಾಜಸ್ವಾಮಿ ವೆಡಲಿನ ಎಂಬ ಕೃತಿಯನ್ನು ತೋಡಿರಾಗದಲ್ಲಿ ಆ ಮಹಾ ವಾಗ್ಗೇಯಕಾರರಿಗೆ ಸಮರ್ಪಿಸಿ ಅನುಗ್ರಹ ಸಂಪಾದಿಸಿದಂತೆ. ಇವರ ವಿಷಯವಾಗಿ ಹೆಚ್ಚಾಗಿ ತಿಳಿದುಬರುವುದಿಲ್ಲ. ಇವರ ಜನನ ಪ್ರಾಯಶಃ 19ನೆಯ ಶತಮಾನದ ಆದಿಭಾಗದಲ್ಲಿ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿದ್ದ ಚಿತ್ತೂರಿಗೆ ಸಮೀಪದಲ್ಲಿರುವ ಗಿರಂಪೇಟೆಯಲ್ಲಿ ಆಗಿರಬೇಕು. ಮಹಾರಾಷ್ಟ್ರದ ಸ್ಮಾರ್ತ ದೇಶಸ್ಥ ಕುಟುಂಬಕ್ಕೆ ಸೇರಿದವರು. ಇವರ ತಂದೆ ಗಣೇಶರಾವ್, ತಾಯಿ ಕೃಷ್ಣಬಾಯಿ, ಸದಾಶಿವರಾಯರು ಹದಿಮೂರನೆಯ ವಯಸ್ಸಿನಲ್ಲಿ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋದರು. ಮತ್ತೆ ಮನೆಗೆ ಬರುವ ಹೊತ್ತಿಗೆ ಲೌಕಿಕ ವಿದ್ಯೆಯನ್ನೂ ಸಂಗೀತ ವಿದ್ಯೆಯನ್ನೂ ಕಲಿತಿದ್ದರಂತೆ. ಚಿತ್ತೂರಿನ ಜಿಲ್ಲಾ ಕಲೆಕ್ಟರ್ ಆಫೀಸಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರಂತೆ. ಆರಣಿ ಜಾಗಿರ್ದಾರ್ ಕುಟುಂಬಕ್ಕೆ ಸೇರಿದ ಸುಂದರಾಬಾಯಿಯನ್ನು ಇವರು ವಿವಾಹವಾಗಿದ್ದರು.

ಮುಮ್ಮುಡಿ ಕೃಷ್ಣರಾಜ ಒಡೆಯರು ಸೇರಿದ ಕೊಪ್ಪರಮ್ ಪೆದ್ದ ಮುನಿಸ್ವಾಮಿರಾಗಿದ್ದರು. ಇವರ ಆಪ್ತವರ್ಗಕ್ಕೆ ಸೇರಿದ ಕೊಪ್ಪರಮ್ ಪೆದ್ದ ಮುನಿಸ್ವಾಮಿ ಶೆಟ್ಟಿ ಮತ್ತು ಚಿನ್ನ ಮುನಿಸ್ವಾಮಿ ಶೆಟ್ಟಿ ಸಹೋದರರು ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚಿತ್ತೂರಿಗೆ ಭೇಟಿ ನೀಡಿದಾಗ ಅಲ್ಲೇ ಇದ್ದ ಸದಾಶಿವರಾಯರ ಸಂಗೀತದಿಂದ ಪ್ರಭಾವಿತರಾಗಿ ಅವರನ್ನು ಮಹಾರಾಜರಿಗೆ ಪರಿಚಯಮಾಡಿಸುವ ಉದ್ದೇಶದಿಂದ ಮೈಸೂರಿಗೆ ಜೊತೆಯಲ್ಲಿ ಕರೆದುಕೊಂಡು ಬಂದರು. ಮುಮ್ಮುಡಿ ಪಡಿಸಿದ್ದೇ ಅಲ್ಲದೆ ತಮ್ಮ ಆಸ್ಥಾನ ವಿದ್ವಾಂಸರಾಗಿಯೂ ನೇಮಿಸಿಕೊಂಡರು. ಮುಂದೆ ರಾಯರು ಮೈಸೂರಿನಲ್ಲೇ ನೆಲಸಿದುದರಿಂದ ಮೈಸೂರು ಸದಾಶಿವರಾವ್ ಎಂದೇ ಖ್ಯಾತನಾಮರಾದರು.

ರಾಯರದು ಮಡಿವಂತಿಕೆ ಜೀವನ. ಎಲ್ಲ ದೇವರಲ್ಲಿ ಭಕ್ತಿ ಇಟ್ಟುಕೊಂಡಿದ್ದರು. ಸ್ವತಃ ಲಕ್ಷ್ಮೀನರಸಿಂಹ ಉಪಾಸಕರು. ಪ್ರಾತಃಕಾಲದ ಪೂಜೆ ಪುರಸ್ಕಾರಾನಂತರ ಉತ್ತರೀಯವನ್ನು ನಡುವಿಗೆ ಕಟ್ಟಿ ಪ್ರತಿದಿನವೂ ಸುಮಾರು 12 ಗಂಟೆಯ ಹೊತ್ತಿನಲ್ಲಿ ಮನೆಯ ಮುಂಬಾಗಿಲಿನಲ್ಲಿ ನಿಂತು ದಾರಿಯಲ್ಲಿ ಬರುವ ಬ್ರಾಹ್ಮಣರಿಗೆ ನಮಸ್ಕರಿಸಿ ತನ್ನ ಮನೆಯಲ್ಲಿ ಭೋಜನ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಸಾಕಷ್ಟು ಜನ ಊಟಕ್ಕೆ ಸಿಕ್ಕುವವರೆಗೂ ಅವರಿಗೆ ತೃಪ್ತಿ ಆಗುತ್ತಿರಲಿಲ್ಲ. ಖುದ್ದಾಗಿ ತಾವೇ ನಿಂತು ಭೋಜನದ ಏರ್ಪಾಡನ್ನು ನೋಡಿಕೊಳ್ಳೂತ್ತಿದ್ದರು. ಭೋಜನಾನಂತರ ದಕ್ಷಿಣೆ ತಾಂಬೂಲಗಳನ್ನು ನೀಡಿ ಸತ್ಕರಿಸುತ್ತಿದ್ದರು.
ಒಂದು ಸಲ ಇವರ ಸಂಗೀತ ಕಛೇರಿ ನಡೆಯುತ್ತಿದ್ದಾಗ ಶ್ರೋತೃಗಳು ರಾಯರೇ ರಚಿಸಿದ ಕಮಲಾಮನೋಹರಿ ರಾಗದ ನರಸಿಂಹುಡು ದಯಿಂಚೆನು ಎಂಬ ಕೃತಿ ಹಾಡುವಂತೆ ಒತ್ತಾಯಿಸಿದರಂತೆ. ಲಕ್ಷ್ಮೀನರಸಿಂಹ ಉಪಾಸಕರಾದ ಇವರು ಈ ಕೃತಿಯನ್ನು ಎಲ್ಲ ಸಂದರ್ಭಗಳಲ್ಲಿಯೂ ಹಾಡಲು ಇಷ್ಟಪಡುತ್ತಿರಲಿಲ್ಲ. ಆದರೆ ಶ್ರೋತೃಗಳ ಒತ್ತಾಯದಿಂದ ಮನಸ್ಸಿಲ್ಲದ ಮನಸ್ಸಿನಿಂದ ಇದನ್ನು ಹಾಡಲು ತೊಡಗಿದರು. ಅಷ್ಟರಲ್ಲೇ ಇದ್ದಕ್ಕಿದ್ದಂತೆ ಗೋಡೆಯ ಮೇಲೆ ನೇತುಹಾಕಿದ್ದ ನರಸಿಂಹನ ಪಟದ ಗಾಜು ಒಡೆದು ಚೂರುಚೂರಾಗಿ ಹೊತ್ತಿಸಿದ್ದ ದೀಪಗಳೆಲ್ಲ ನಂದಿಹೋದವು. ರಾಯರು ತತ್‍ಕ್ಷಣವೇ ಹಾಡುವುದನ್ನು ನಿಲ್ಲಿಸಿ ನರಸಿಂಹನಿಗೆ ಮಂಗಳಾರತಿ ಎತ್ತಿದರಂತೆ. ನೆರೆದಿದ್ದ ಜನ ತಮ್ಮಿಂದ ಅರಿಯದೆ ಘಟಿಸಿದ ಅಪಚಾರಕ್ಕೆ ಕ್ಷಮೆಕೋರಿ ನರಸಿಂಹಭಕ್ತರಿಗೆ ಮಾಡಿದ ನೋವಿಗೆ ಪರಿತಪಿಸಿದರಂತೆ.

ಒಮ್ಮೆ ಇವರ ಹತ್ತಿರದ ಸ್ನೇಹಿತ ಆರುವೇಟಿ ರಾಮಸ್ವಾಮಿಶೆಟ್ಟಿ ಎಂಬ ಒಬ್ಬ ವರ್ತಕ ತಮ್ಮ ವ್ಯಾಪಾರಕ್ಕಾಗಿ ಮೈಸೂರು ಬಿಟ್ಟು ಹೋಗಬೇಕಾಯಿತು. ಅಂಗಡಿಯನ್ನು ವೃಥಾ ಮುಚ್ಚಬೇಕಾಗುತ್ತದಲ್ಲ ಎಂದು ನೊಂದು ಅದರ ವಹಿವಾಟನ್ನು ತಾವು ವಾಪಸು ಬರುವತನಕ ನೋಡಿಕೊಳ್ಳುವಂತೆ ರಾಯರನ್ನು ಕೇಳಿಕೊಂಡು ಒಪ್ಪಿಸಿಹೋದರು. ಇವರ ಧಾರಾಳತನ ಮತ್ತು ದಯಾಪರತೆ ತಿಳಿದಿದ್ದ ಹತ್ತಿರದ ಸ್ನೇಹಿತರು ತಮಗೆ ಅವಶ್ಯವಾದ ಸಾಮಾನುಗಳನ್ನು ಅಂಗಡಿಯಿಂದ ದುಡ್ಡುಕೊಡದೇ ತೆಗೆದುಕೊಂಡು ಹೋದರು. ಅಂಗಡಿಯ ಮಾಲೀಕ ವಾಪಸಾಗುವ ಹೊತ್ತಿಗೆ ಅಂಗಡಿ ಬಹುತೇಕ ಖಾಲಿ ಆಗಿದ್ದುದನ್ನು ನೋಡಿ ಬಲು ದುಃಖಿತನಾಗಿ ರಾಯರನ್ನು ಈ ಬಗ್ಗೆ ವಿಚಾರಿಸಿದ. ರಾಯರು ಹೇಳಿದರಂತೆ ``ಜನತೆಗೆ ನೀಡಿದ ಸಾಮಾನುಗಳನ್ನು ಕೃಷ್ಣಾರ್ಪಣ ಎಂದು ತಿಳಿದು ಪುಣ್ಯ ಸಂಪಾದಿಸುತ್ತೀರೋ ಅಥವಾ ಅವುಗಳ ಪೂರ್ತ ಹಣ ನನ್ನಿಂದ ತೆಗೆದುಕೊಂಡು ಪುಣ್ಯವನ್ನು ನನಗೇ ಬಿಡುತ್ತೀರೋ?``. ದಾಕ್ಷಿಣ್ಯಶಾಲಿ ವರ್ತಕ ಮೊದಲನೆಯದನ್ನೇ ಆಯ್ದನಂತೆ!

ರಾಯರು ತಮ್ಮ ಜೀವಿತ ಕಾಲದಲ್ಲಿ ಒಂದು ದಿನವೂ ಯಾರನ್ನೂ ಕೆಟ್ಟ ಅಥವಾ ಒರಟು ಮಾತಿನಿಂದ ಕರೆದದ್ದಿಲ್ಲ. ಒಮ್ಮೆ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ, ಒಬ್ಬ ಬಡಬ್ರಾಹ್ಮಣ ದೇವರನಾಮಗಳನ್ನು ಹಾಡಿಕೊಂಡು ಇವರ ಮನೆಯ ಹತ್ತಿರ ಬಂದನಂತೆ. ಆತನ ಹಾಡಿಕೆ ಕೇಳಿ ಶಿಷ್ಯರು ನಕ್ಕರಂತೆ. ಇದರಿಂದ ರಾಯರು ಬಲು ಬೇಸರಗೊಂಡು ಇನ್ನೊಬ್ಬರನ್ನು ಯಾವ ಕಾರಣಕ್ಕೂ ನೋಯಿಸಕೂಡದು ಎಂದು ಬುದ್ಧಿವಾದ ಹೇಳಿದರು. ಅಲ್ಲದೆ ಆತನನ್ನು ಒಳಕ್ಕೆ ಬರಮಾಡಿಕೊಂಡರು. ಆತನಿಂದ ಇನ್ನೂ ಸ್ವಲ್ಪ ಹಾಡಿಸಿ, ಆತನಿಗೆ ಯುಕ್ತ ಬಹುಮಾನವನ್ನೂ ನೀಡಿ ಕಳುಹಿಸಿದರಂತೆ.

ಮೈಸೂರು ವಾಸುದೇವಾಚಾರ್ಯರ ಅಭಿಪ್ರಾಯದಂತೆ ಸದಾಶಿವರಾಯರದು ಸಾಮಾನ್ಯ ಎತ್ತರ. ಒಳ್ಳೆಯ ಮೈಕಟ್ಟು, ಅಗಲ ಹಣೆ, ಹೊಳಪು ಕಣ್ಣುಗಳು, ಗಿರಲು ಮೀಸೆ, ಅವರ ಉಡುಗೆ ತೊಡುಗೆ ಸರಳ ಹಾಗೂ ನಿರಾಡಂಬರ.
ಸದಾಶಿವರಾಯರು ನೂರಾರು ಕೃತಿಗಳನ್ನು ರಚಿಸಿದ್ದಾರೆ. ಆದರೆ ಸದ್ಯ ಲಭ್ಯವಾಗಿರುವುದು ಸುಮಾರು 52 ಮಾತ್ರ.
ಮದರಾಸಿನ ಮ್ಯೂಸಿಕ್ ಅಕಾಡೆಮಿಯವರು 17 ಕೃತಿಗಳ ಒಂದು ಪುಸ್ತಕ ಪ್ರಕಟಿಸಿದ್ದಾರೆ 91947). ಮೈಸೂರಿನ ಸಂಗೀತ ಕಲಾಭಿವರ್ಧಿನಿ ಸಭಾದವರು 35 ಕೃತಿಗಳ ಸ್ವರ ಸಾಹಿತ್ಯ ಹಾಗೂ 12 ಕೃತಿಗಳ ಸಾಹಿತ್ಯವಿರುವ ಪುಸ್ತಕವನ್ನು ಹೊರತಂದಿದ್ದಾರೆ (1954). ಎನ್. ಚನ್ನಕೇಶವಯ್ಯನವರು ಸಿದ್ದಪಡಿಸಿದ 7 ಕೃತಿಗಳಿರುವ ಪುಸ್ತಕವನ್ನು 1970ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿ ಪ್ರಕಟಿಸಿದೆ.

ಇವರ ರಚನೆಗಳು ಸಂಸ್ಕøತ ಮತ್ತು ತೆಲುಗು ಭಾಷೆಗಳಲ್ಲಿವೆ. ಜನಪ್ರಿಯ ರಾಗಗಳೇ ಅಲ್ಲದೆ ವಿರಳ ರಾಗಗಳಾದ ಪುನ್ನಾಗ ತೋಡಿಯಲ್ಲಿ ಏಲಾಗು ದಯವಚ್ಚುರಾ, ಚಂದ್ರಚೂಡದಲ್ಲಿ (ಮಾಯಾಮಾಳವಗೌಳ ಜನ್ಯರಾಗ) ನಮಾಮಿ ಶ್ರೀಮನ್ಮಹಾದೇವೇಂದ್ರಸರಸ್ವತಿ, ಪೂರ್ಣಷಡ್ಜದಲ್ಲಿ ಶ್ರೀರಮಣ ನೀವೇಕೃತಿಗಳನ್ನು ರಚಿಸಿದ್ದಾರೆ. ದಕ್ಷಿಣಭಾರತದ ಪ್ರಸಿದ್ಧ ಯಾತ್ರಾಸ್ಥಳಗಳನ್ನು ಸಂದರ್ಶಿಸಿ ಶ್ರೀರಂಗದ ರಂಗನಾಥಸ್ವಾಮಿಯನ್ನು ಕುರಿತು ಕಮಾಚ್ ರಾಗದಲ್ಲಿ ಪರಮಾದ್ಭುತ ಮೈನ, ಕಾಂಚೀಪುರದ ಕಾಮಾಕ್ಷಿಯನ್ನು ಕುರಿತು ಕಲ್ಯಾಣಿ ರಾಗದಲ್ಲಿ ಕನುಗೋನಿ ಧನ್ಯುಡನೈತಿನಿ ಓ ರಾಜ ರಾಜೇಶ್ವರಿ, ಸಾವೇರಿ ರಾಗದಲ್ಲಿ ಶ್ರೀಕಾಮಕೋಟಿಪೀಠಸ್ಥಿತೇ, ಏಕಾಮ್ರೇಶನನ್ನು ಕುರಿತು ಕಾಂಭೋಜಿರಾಗದಲ್ಲಿ ಸಾಮ್ರಾಜ್ಯದಾಯಕೇಶ, ಮದರಾಸಿನ ತಿರುವಲ್ಲಿಕ್ಕೇಣಿಯಲ್ಲಿರುವ ಪಾರ್ಥಸಾರಥಿಯನ್ನು ಕುರಿತು ಭೈರವೀ ರಾಗದಲ್ಲಿ ಶ್ರೀ ಪಾರ್ಥಸಾರಥೇ, ಅಠಾಣರಾಗದಲ್ಲಿ ವಚಾಮಗೋಚರುಂಡನಿ, ಪಳನಿಯ ವೇಲಾಯುಧಪಾಣಿಯನ್ನು ಕುರಿತು ಕಾಂಭೋಜರಾಗದಲ್ಲಿ ಶ್ರೀಸುಬ್ರಹ್ಮಣ್ಯ, ಭವಾನಿಯಲ್ಲಿ ಭೈರವಿ ರಾಗದ ಶ್ರೀ ಲಕ್ಷ್ಮೀರಮಣ, ಬೇಲೂರಿನ ಚೆನ್ನಕೇಶವಸ್ವಾಮಿಯನ್ನು ಕುರಿತು ಮೋಹನರಾಗದಲ್ಲಿ ಸ್ತ್ರೀ ವೇಷಮುದಾಲ್ಚಿನ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳ ಅಂಕಿತ ಸದಾಶಿವ, ಕೆಲವು ಕೃತಿಗಳಲ್ಲಿ ಮಧ್ಯಮಕಾಲದ ಸಾಹಿತ್ಯವಿದೆ. ಇವರು ಕೃತಿಗಳೇ ಅಲ್ಲದೆ ಸ್ವರಜತಿ, ಪದವರ್ಣ, ತಿಲ್ಲಾನಗಳನ್ನೂ ರಚಿಸಿದ್ದಾರೆ. ರಾಯರ ರಚನೆಗಳಲ್ಲಿ ಸಾಹಿತ್ಯ ಸಂಗೀತ ಒಂದನ್ನೊಂದು ಬೆರೆತುಕೊಂಡಿವೆ. ಚಿಟ್ಟೆಸ್ವರ, ಸಾಹಿತ್ಯ ಮತ್ತು ವಿಳಂಬ, ಮಧ್ಯಮ ಕಾಲ ಸಾಹಿತ್ಯಗಳ ಕಲಾತ್ಮಕ ಹೊಂದಾಣಿಕೆ ಇವುಗಳಲ್ಲಿಯ ವೈಶಿಷ್ಟ್ಯ. ಇವು ಭಕ್ತಿರಸಪ್ರಧಾನವಾಗಿದ್ದು ಪೂರ್ಣ ರಾಗಭಾವಯುಕ್ತವಾಗಿವೆ. ರಾಯರ ಕೃತಿಗಳನ್ನು ಕಲಿಯುವುದು ಸುಲಭ ಸಾಧ್ಯವಲ್ಲ. ಸರಿಯಾಗಿ ನಿರೂಪಿಸಿದಲ್ಲಿ ಮಾತ್ರ ಪರಿಣಾಮಕಾರಿಯಾಗುತ್ತದೆ. ರಾಗಭಾರವಪೂರಿತವಾಗಿರುತ್ತವೆ.

 ಮೈಸೂರಿನಲ್ಲಿ ರಾಮೋತ್ಸವವನ್ನು ಪ್ರಾರಂಭಿಸಲು ಇವರು ಕಾರಣಕರ್ತರು ಎನ್ನುತ್ತಾರೆ. ಇವರ ಪ್ರಮುಖ ಶಿಷ್ಯರು ವೀಣೆ ಶೇಷಣ್ಣ ಮತ್ತು ವೀಣೆ ಸುಬ್ಬಣ್ಣ. ಇತರರು ಹಾನಗಲ್ ಚಿದಂಬರಯ್ಯ, ಚಿಕ್ಕನಾಯಕನಹಳ್ಳಿ ವೆಂಕಟೇಶಯ್ಯ, ಗಂಜಾಮ್ ಸೂರ್ಯನಾರಾಯಣಪ್ಪ ಮತ್ತು ಬೆಟ್ಟದಪುರದ ಶಾಮಣ್ಣ.

ಸದಾವಶಿವರಾಯರು ಸುಮಾರು 80 ವರ್ಷಕ್ಕೂ ಮೀರಿ ಜೀವಿಸಿದ್ದರು. ತಮ್ಮ ಮರಣವನ್ನು ಮೊದಲೇ ತಿಳಿದಿದ್ದರಂತೆ. ಕೊನೆಯ ದಿನ, ಉತ್ತರಾಭಿಮುಖವಾಗಿ ಕುಳಿತು ಲಲಿತ ರಾಗದ ಕಮಲಾಕಾಂತ, ಕೃತಿಯನ್ನು ಮೆಲ್ಲನೆ ಹಾಡುತ್ತಿದ್ದರಂತೆ ಪ್ರಾಣವನ್ನು ತೊರೆದರಂತೆ.		
		 (ಆರ್.ಎನ್.ಟಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ